ಬ್ಲ್ಯಾನ್ಫೋರ್ಡ್, ವಿಲಿಯಮ್ ತಾಮಸ್

ಬ್ಲ್ಯಾನ್‍ಫೋರ್ಡ್, ವಿಲಿಯಮ್ ತಾಮಸ್
	1832-1995, ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯ ಸಂಸ್ಥೆಯಲ್ಲಿ 27 ವರ್ಷ ಪರ್ಯಂತ ಸೇವೆ ಮಾಡಿ ಭಾರತದ ವಿವಿಧ ಭಾಗಗಳಲ್ಲಿಯ ಶಿಲಾಸ್ತೋಮಗಳ ಬಗ್ಗೆಯೂ ಪ್ರಾಚೀನ ಜೀವ್ಯವಶೇಷಗಳ ಬಗ್ಗೆಯೂ ಅಧ್ಯಯನ. ಸಂಶೂೀಧನೆ ನಡೆಸಿದ ಬ್ರಿಟಿಷ್ ಭೂವಿಜ್ಞಾನಿ, ಜನನ ಲಂಡನ್ನಿನಲ್ಲಿ (7-10-1832). ಬ್ರಿಟನ್ ಮತ್ತು ಪ್ಯಾರಿಸ್ ನಗರಗಳಲ್ಲಿ ಕೆಲಕಾಲ ವ್ಯಾಸಂಗಮಾಡಿ ಲಂಡನ್ನಿನಲ್ಲಿ ರಾಯಲ್ ಸ್ಕೂಲ್ ಆಫ್ ಮ್ಯೆನ್ಸ್ ಮುಖಾಂತರ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು (1852). ವಿದ್ಯಾಥಿರ್üಯಾಗಿದ್ದಾಗ ಇವರಿಗೆ ಕಾರ್ನ್‍ವಾಲ್ ಡ್ಯೂಕರ ವಿದ್ಯಾರ್ಥಿವೇತನವೂ ದೊರಕಿತ್ತು. ಅಂದಿನ ಕಾಲಕ್ಕೆ ಪ್ರಸಿದ್ಧ ವಿಜ್ಞಾನಿಗಳಾಗಿದ್ದ ಆಂಡ್ರೂ ರ್ಯಾಮ್‍ಸೇ, ವರ್ದಿಂಗ್‍ಟನ್ ಫೋಬ್ಸ್ ಮತ್ತು ತಾಮಸ್ ಹಕ್ಸಲೀ ಮುಂತಾದವರ ಪ್ರಭಾವ ಇವರ ಮೇಲೆ ಬಿದ್ದಿತ್ತು. ಜರ್ಮನಿಯ ಫ್ರೀಬರ್ಗ್ ಸ್ಕೂಲ್ ಆಫ್ ಮೈನ್ಸ್ನಲ್ಲಿ ತರಬೇತು ಪಡೆದು 1955ರಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯ ಸಂಸ್ಥೆ ಸೇರಿದರು.

	ಬಂಗಾಲ, ಬಿಹಾರ, ಒರಿಸ್ಸ ರಾಜ್ಯಗಳ ಕೆಲವು ಪ್ರದೇಶಗಳು, ಗುಜರಾತ್, ಸಿಂಧ್, ರಾಜಪುಟಾಣ, ಬಲೂಚಿಸ್ತಾನಪ್ರಾಂತ್ಯಗಳ ಪ್ರದೇಶಗಳು, ಗೋದಾವರೀ ಮತ್ತು ವಾರ್ಧಾ ಕಣಿವೆಗಳು, ಮಧ್ಯಪ್ರದೇಶದ ಕೋರ್ಬಾಗಳಲ್ಲಿಯ ಕಲ್ಲಿದ್ದಲು ನಿಕ್ಷೇಪಗಳು, ಒರಿಸ್ಸ ಮತ್ತು ತಿರುಚ್ಚಿರಾಪಲ್ಲಿಯ ತೀರಪ್ರದೇಶಗಳು, ನೀಲಗಿರಿ ಪರ್ವತಶ್ರೇಣಿಗಳು, ಬರ್ಮ, ಪರ್ಷಿಯ ಮತ್ತು ಅಬಿಸೀನಿಯ ದೇಶಗಳು-ಹೀಗೆ ಇವರು ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣ ಬೆಳೆಸಿ ಯುಗ ಯುಗಾಂತರ ಅವಧಿಯಲ್ಲಿ ಉದ್ಭವಿಸಿ ಅಲ್ಲಿ ಹರಡಿರುವ ಶಿಲಾಸ್ತೋಮಗಳನ್ನು ಶೋಧಿಸಿ ಅವುಗಳ ಬಗ್ಗೆ ವಿಷಯ ಸಂಗ್ರಹಿಸಿ ಭಾರತದ ಭೂಇತಿಹಾಸ, ಖನಿಜಸಂಪತ್ತು, ವಿವಿಧ ಪ್ರಾಣಿಗಳು, ಇವನ್ನು ಕುರಿತಂತೆ 150 ವಿಜ್ಞಾನ ಬರೆಹಗಳ ಮೂಲಕ ದೀರ್ಘ ವಿವೇಚನೆ ಮಾಡಿದರು. ಈ ಪ್ರಕಟಣೆಗಳಲ್ಲಿ ಭೂವೈಜ್ಞಾನಿಕ ಸರ್ವೇಕ್ಷಣೆಯ ದೃಷ್ಟಿಯಿಂದ ಮಹತ್ವದವಾಗಿರುವಂಥ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಂಸ್ಥೆಯವರ ಪ್ರೌಢ ಚರಿತ್ರೆಗಳೂ (ಮೆಮಾೈರ್ಸ್) ದಾಖಲೆಗಳೂ ಇವೆ. ಸಂಸ್ಥೆಯ ಆಗಿನ ನಿರ್ದೇಶಕ ಇಚ್. ಬಿ. ಮೆಡ್ಲಿಕಾಟ್ ಎಂಬವರೊಂದಿಗೆ ಸಹಗ್ರಂಥಕರ್ತೃವಾಗಿ ಭಾರತದ ಭೂಚರಿತ್ರೆ ಕುರಿತ ಅಮೂಲ್ಯ ಗ್ರಂಥವೊಂದನ್ನು (ಎ. ಮ್ಯಾನ್ಯುಯಲ್ ಆಫ್ ದಿ ಜಿಯೋಲಜಿ ಆಫ್ ಇಂಡಿಯ ಅಂಡ್ ಬರ್ಮ) ರಚಿಸಿ ಅದರ ಪ್ರಕಟನೆಗೆ (1879) ನೆರವಾದರು. ಇವರ ಅನೇಕ ಲೇಖನಗಳಲ್ಲಿ ಇವರು ಪರ್ಯಟನೆ ಮಾಡಿದ ಭಾರತ ಮತ್ತು ಅದರ ನೆರೆ ದೇಶಗಳಲ್ಲಿ ಕಂಡುಬಂದ ವಿವಿಧ ಭೂ, ಜಲಜೀವಜಂತುಗಳ ವರ್ಣನೆಗಳು ಇವೆ. ಭಾರತದ ಪ್ರಾಣಿರಾಶಿಗಳ ವಿಷಯ ಸಂಗ್ರಹ ಕಾರ್ಯಕ್ಕೆ ಭಾರತ ಸರ್ಕಾರ ಬ್ಲ್ಯಾನ್‍ಫೋರ್ಡರನ್ನು ಸಂಪಾದಕರನ್ನಾಗಿ ನೇಮಿಸಿತು (1888). ಪ್ರಕಟವಾದ ಹದಿನೆಂಟು ಸಂಪುಟಗಳ ಪೈಕಿ ಎರಡು ಸಂಪುಟಗಳು ಪಕ್ಷಿಕುಲಗಳನ್ನು ಕುರಿತಂತೆಯೂ ಒಂದು ಸ್ತನಿಗಳನ್ನು ಕುರಿತಂತೆಯೂ ಇವೆ.

	ಭೂವೈಜ್ಞಾನಿಕ ಮಹತ್ತ್ವವುಳ್ಳ ಸಮಸ್ಯೆಗಳ ವಿಚಾರಗಳ ವಿಮರ್ಶೆ ಮಾಡಿ ಅವುಗಳ ಪರಿಹಾರಕ್ಕೆ ಅನೇಕ ಸಲಹೆಗಳನ್ನು ಬ್ಲ್ಯಾನ್‍ಫೋರ್ಡ್ ಸೂಚಿಸಿದ್ದಾರೆ. ಓ. ಫೀಸ್ಟ್‍ಮ್ಯಾನಟಲ್ ಎಂಬವರು ಸಸ್ಯಾವಶೇಷಗಳ ಆಧಾರದ ಮೇಲೆ ಗೊಂಡ್ವಾನ ಶಿಲಾಸಮುದಾಯಗಳ ಕೆಳಮಟ್ಟದ ಮತ್ತು ಮೇಲ್ಮಟ್ಟದ ವಯೋನಿರ್ಧಾರವನ್ನು ಅನುಕ್ರಮವಾಗಿ ಕೆಳಟ್ರಯಾಸಿಕ್ ಎಂದೂ ಕೆಳಜ್ಯೂರಾಸಿಕ್ ಎಂದೂ ನಿಗದಿಪಡಿಸಿರುವುದು ಸರಿಯಲ್ಲವೆಂದೂ ಸಮುದ್ರಪ್ರಾಣಿ ಜೀವ್ಯವಶೇಷಗಳ ಆಧಾರವೇ ಶಿಲೆಗಳ ವಯೋನಿರ್ಧಾರಕೈ ಆಧಾರವೆಂದೂ ಬ್ಲ್ಯಾನ್‍ಫೋರ್ಡರು ವಾದಿಸಿದರು. ಶಿಲಾಸ್ತೋಮಗಳ ಕೆಳಮಟ್ಟದ ತಾಲ್ಚೀರ್ ಶಿಲಾರಚನೆಗಳು ಬೇಲಿನ ಪೇಲಿಯೊಝೋಯಿಕ್ (ಪ್ರಾಗ್ಜೀವಿಯುಗ) ಯುಗದ್ದೆಂದೂ ಕಚ್ ಪ್ರಾಂತ್ಯದಲ್ಲಿ ಕಂಡು ಬರುವ ಮೇಲುಮಟ್ಟದ ಶಿಲಾರಚನೆಗಳ ಪ್ರಾಯ ಮಧ್ಯಯುಗದ (ಮೀಸೋeóÉೂೀಯಿಕ್) ಮೇಲಿನ ಜ್ಯುರಾಸಿಕ್ ಕಾಲವಿಭಾಗದ್ದೆಂದೂ ಪರಿಷ್ಕರಿಸಿದರು.

	ಭೂಜಲಗಳು ಸ್ಥಿರವಾಗಿವೆ, ಅವು ಸ್ಥಳಾಂತರವಾಗಿಲ್ಲ ಎಂಬ ಸಿದ್ಧಾಂತವನ್ನು ಬ್ಲ್ಯಾನ್ಫೋರ್ಡರು ಪ್ರಶ್ನಿಸಿ ಅಬಿಸೀನಿಯ ಪರ್ಷಿಯ ಮತ್ತು ಭಾರತಗಳಲ್ಲಿ ಕಂಡುಬರುವ ಜೀವಂತ ಪ್ರಾಣಿಗಳ ಮತ್ತು ಪ್ರಾಣಿಜೀವ್ಯವಶೇಷಗಳ ತೌಲನಿಕ ಆಧಾರದ ಮೇಲೆ, ಆಫ್ರಿಕ ಮತ್ತು ಭಾರತಗಳ ಮಧ್ಯೆ ಭೂಸೇತುವೆಗಳಿದ್ದುವೆಂದೂ ಈಗಿನ ಅನೇಕ ಪ್ರಸ್ಥಭೂಮಿಗಳು ಸಮುದ್ರದ ಅಂತರಾಳಗಳಾಗಿದ್ದುವೆಂದೂ ವಾದಿಸಿದರು. (1889).

	1881ರಲ್ಲಿ ಇಟಲಿಯಲ್ಲಿ ಜರಗಿದ ಅಂತಾರಾಷ್ಟ್ರೀಯ ಭೂವೈಜ್ಞಾನಿಕ ಸಮ್ಮೇಳನದ ಉಪಾಧ್ಯಕ್ಷರಾಗಿ ಚುನಾಯಿತರಾದರು. ಇಂಥ ಗೌರವ ಇವರಿಗೆ ಮತ್ತೆ ಮೂರಾವರ್ತಿ (1885, 1895 ಮತ್ತು 1900) ದೊರಕಿತು. ಲಂಡನ್ನಿನ ರಾಯಲ್ ಸೊಸೈಟಿ ಇವರನ್ನು ತನ್ನ ಸದಸ್ಯತ್ವಕ್ಕೆ ಚುನಾಯಿಸಿದ್ದೂ (1884) ಅಲ್ಲದೆ, ಮೂರು ಬಾರಿ ಉಪಾಧ್ಯಕ್ಷ ಪದವಿಯನ್ನೂ ನೀಡಿತು. 1888ರಲ್ಲಿ ಇವರು ಜಿಯೊಲಾಜಿಕಲ್ ಸೊಸೈಟಿಯ ಅಧ್ಯಕ್ಷರಾದರು. ಮೂರಾವರ್ತಿ ಜûೂಲಾಜಿಕಲ್ ಸೊಸೈಟಿಯ ಉಪಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದರು. ಇವರಿಗೆ ಜಿಯೊಲಾಜಿಕಲ್ ಸೊಸೈಟಿಯ ವೂಲಾಸ್ಟನ್ ಪದಕ (1882). ಕೆನಡದ ಮ್ಯಾಗಿಲ್ ವಿಶ್ವವಿದ್ಯಾಲಯದ ಎಲ್‍ಎಲ್. ಡಿ. ಪದವಿ (1884). ಮತ್ತು ರಾಯಲ್ ಸೊಸೈಟಿಯ ರಾಯಲ್ ಪದಕ (1901) ಪ್ರಾಪ್ತವಾದುವು.

	ಬ್ಲ್ಯಾನ್‍ಫೋರ್ಡ್ ತಮ್ಮ ಎಪ್ಪತ್ತಮೂರನೆಯ ವಯಸ್ಸಿನಲ್ಲಿ 1905ರ ಉತ್ತರಾರ್ಧದಲ್ಲಿ ನಿಧನಾದರು. (ಸಿ.ಎಸ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ